NLP_Assignment_1 / eesanje /url_46_103_5.txt
CoolCoder44's picture
efe37858b586a9a048bc0ecc57a15bf9f7189f016b8fcfa2006a47467850c382
c188c15 verified
raw
history blame
5.6 kB
ಶೀಘ್ರದಲ್ಲೇ ಜೆಡಿಎಸ್‌ ಬಿಜೆಪಿಯೊಂದಿಗೆ ವಿಲೀನವಾಗಲಿದೆ : ಚೆಲುವರಾಯಸ್ವಾಮಿ ಭವಿಷ್ಯ
ಬೆಂಗಳೂರು,ಜೂ.20– ಬಿಜೆಪಿಯೊಂದಿಗೆ ಜೆಡಿಎಸ್‌‍ ಆದಷ್ಟು ಬೇಗ ವಿಲೀನವಾಗಲಿದೆ ಎಂದು ಕೆಲವರು ಹೇಳಿರುವುದಾಗಿ ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌‍ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದವು. ಈಗ ಬಿಜೆಪಿಯೊಂದಿಗೆ ಜೆಡಿಎಸ್‌‍ ವಿಲೀನವಾಗಲಿದೆ ಎಂದು ಕೆಲವರು ನನಗೆ ಹೇಳಿದ್ದಾರೆ ಎಂದರು.
ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಉಪಚುನಾವಣೆಗೆ ತಯಾರಿ ನಡೆಸಲು ಹಾಗೂ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಒಳ್ಳೆಯ ಕೆಲಸವನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ.
ಅವರಿಗೂ ಒಳ್ಳೆಯ ಅವಕಾಶ ಸಿಗಲಿದೆ. ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಅವರೇ ಸೂಕ್ತ ತೀರ್ಮಾನ ಮಾಡುತ್ತಾರೆ. ನನಗೆ ಸಣ್ಣ ಜವಾಬ್ದಾರಿಯನ್ನು ನೀಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ತೀರ್ಮಾನ ಮಾಡಿಲ್ಲ. ಜನರ ಪಕ್ಷದ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಹೈ ವೋಲ್ಟೇಜ್‌ ಕ್ಷೇತ್ರವಾಗಿರುವುದರಿಂದ ಮೊದಲೇ ಅಭ್ಯರ್ಥಿ ಹೆಸರು ಹೇಳಿದರೆ ಅಚ್ಚರಿಯ ಘೋಷಣೆಯಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗೆ 85 ಸಾವಿರ ಮತಗಳನ್ನು ನೀಡಿದ್ದಾರೆ. ಡಿ.ಕೆ.ಶಿವಕುಮಾರ್‌ರವರ ನಾಯಕತ್ವ ಇರುವುದಕ್ಕೆ ಈ ಪ್ರಮಾಣದ ಮತಗಳು ಲಭಿಸಿವೆ ಎಂದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬಹಳ ದಿನದಿಂದ ಕನಸು ಕಟ್ಟಿಕೊಂಡಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಮಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬಹುದು ಎಂಬ ಆಸೆ ಹೊಂದಿದ್ದಾರೆ. ಕುಮಾರಸ್ವಾಮಿಯವರು ಅವರ ಪುತ್ರನಿಗೆ ಟಿಕೆಟ್‌ ನೀಡಬೇಕೆಂದುಕೊಂಡಿದ್ದಾರೆ. ಕಾದು ನೋಡೋಣ. ಏನು ಮಾಡುತ್ತಾರೋ! ಅವರ ಪಕ್ಷಗಳ ತೀರ್ಮಾನ ಅವರಿಗೆ ಬಿಟ್ಟದ್ದು. ನಾವು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿಗೆ ನೈತಿಕತೆ ಇಲ್ಲ :ತೈಲ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ. ಅವರಿಗೆ ನಾಚಿಕೆಯಾಗಬೇಕು ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.ಪೆಟ್ರೋಲ್‌ ಬೆಲೆ 70 ರೂ. ಇದ್ದದ್ದನ್ನು ಹೆಚ್ಚಳ ಮಾಡಿದರು. ಅಡುಗೆ ಅನಿಲ ಬೆಲೆ 1,200 ರೂ. ಗೆ ಹೆಚ್ಚಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಿದೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು.
ಆಡಳಿತ ನಡೆಸುವವರು ತೆರಿಗೆ ಸಂಗ್ರಹ ಮಾಡಬೇಕಲ್ಲವೇ? ಬೆಲೆ ಇಳಿಸಲು ಬಿಜೆಪಿಯ 17 ಸಂಸದರು ಕೇಂದ್ರದ ಮುಂದೆ ಪ್ರತಿಭಟನೆ ಮಾಡಲಿ ಎಂದು ಹೇಳಿದರು.ತೆರಿಗೆ ಸಂಗ್ರಹ ಮಾಡುವುದು ಸಹಜ. ಆದರೆ ಅದು ಸಾರ್ವಜನಿಕರಿಗೆ ಹೊರೆಯಾಗಬಾರದು. ನಮ ರಾಜ್ಯದ ತೈಲ ಬೆಲೆ ಬೇರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದರು.